ಅಂಬಳೆ ರಾಮಕೃಷ್ಣಶಾಸ್ತ್ರೀ ಕೃಷ್ಣಶಾಸ್ತ್ರೀ ಅವರು ಕರ್ನಾಟಕದ
ಸರ್ವಮಾನ್ಯ ವಿದ್ವಾಂಸರಲ್ಲಿ ಒಬ್ಬರು. ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ನಡೆದ ಹೊಸಗನ್ನಡದ ನವೋದಯದಲ್ಲಿ,
ಅವರು ವಿಶಿಷ್ಟವಾದ ಪಾತ್ರ ವಹಿಸಿದರು. ಆ ಸಂದರ್ಭದಲ್ಲಿ ಶಾಸ್ತ್ರಿಯವರ ವಿದ್ವತ್ತು, ದೃಷ್ಟಿಕೋನದ
ಆಧುನಿಕತೆ ಮತ್ತು ವಿಮರ್ಶನಪ್ರಜ್ಞೆಗಳು ಬಹಳ ಮುಖ್ಯವಾಗಿದ್ದವು. ಗುಣ ಮತ್ತು ಪ್ರಮಾಣ ಎರಡರಲ್ಲಿಯೂ
ಅಗಾಧವಾದ ಅವರ ಬರವಣಿಗೆಯು ಇಂದಿಗೂ ಮಹತ್ವಪೂರ್ಣವಾಗಿದೆ. ಅವರು ಸಾಹಿತ್ಯವಿಮರ್ಶಕ, ಭಾಷಾಶಾಸ್ತ್ರಜ್ಞ,
ಜೀವನಚರಿತ್ರಕಾರ, ಪತ್ರಿಕೋದ್ಯಮಿ, ವಿದ್ವಾಂಸ ಮುಂತಾದ ಹಲವು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಇದರ ಸಂಗಡ ಪೂರ್ಣಪ್ರಮಾಣದ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ಯುವಪೀಳಿಗೆಯ ಲೇಖಕರನ್ನು ಕಂಡುಹಿಡಿಯುವ
ಮತ್ತು ಪ್ರೋತ್ಸಾಹಿಸುವ ಉದ್ದೇಶದಿಂದ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅವರು ಪ್ರಾರಂಭಿಸಿದ
‘ಪ್ರಬುದ್ಧ ಕರ್ನಾಟಕ’ವೆಂಬ
ತ್ರೈಮಾಸಿಕವು ಆ ಕೆಲಸವನ್ನು ಅತ್ಯುತ್ತಮವಾಗಿ ನಿರ್ವಹಿಸಿತು.
ಮೈಸೂರಿನಲ್ಲಿ ಹುಟ್ಟಿದ ಶಾಸ್ತ್ರಿಯವರು ತಮ್ಮ ವಿದ್ಯಾಭ್ಯಾಸವನ್ನು
ವೆಸ್ಲೆಯನ್ ಮಿಷನ್ ಹೈಸ್ಕೂಲ್ ಮತ್ತು ಮಹಾರಾಜ ಕಾಲೇಜುಗಳಲ್ಲಿ ನಡೆಸಿದರು. ಭಾಷೆಗಳು ಮತ್ತು ಇತಿಹಾಸ
ವಿಷಯಗಳಲ್ಲಿ ಅಧ್ಯಯನ ಮಾಡಿ ಬಿ.ಎ. ಪದವಿಯನ್ನೂ ಕನ್ನಡ ಮತ್ತು ಸಂಸ್ಕೃತಗಳನ್ನು ಆಧ್ಯಯನ ಮಾಡಿ ಎಂ.ಎ.
ಪದವಿಯನ್ನೂ ಪಡೆದರು.(1913, 1915)
ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಟ್ಯೂಟರ್
ಅಗಿ ನೇಮಕವಾದರು. ವಿಜ್ಞಾನಕ್ಕೆ ಮೊದಲ ಮಣೆಯಿದ್ದ ಆ ವಾತಾವರಣದಲ್ಲಿ, ಕನ್ನಡವನ್ನು ಬೆಳೆಸುವ ಸವಾಲನ್ನು
ಅವರು ಎದುರಿಸಿದರು. ‘ಸೆಂಟ್ರಲ್ ಕಾಲೇಜ್ ಕರ್ನಾಟಕಸಂಘ’(1918)
ಮತ್ತು ‘ಪ್ರಬುದ್ಧ
ಕರ್ನಾಟಕ’ಗಳನ್ನು(1919)
ಪ್ರಾರಂಭಿಸುವುದರ ಮೂಲಕ, ಅಲ್ಲಿ ಕನ್ನಡದ ಹೆಗ್ಗಳಿಕೆಯನ್ನು ಸ್ಥಾಪಿಸುವುದು ಅವರಿಗೆ ಸಾಧ್ಯವಾಯಿತು.
ಈ ಕೆಲಸದಲ್ಲಿ ಬೆಂಗಳೂರಿನ ಸಾಂಸ್ಕೃತಿಕ ನಾಯಕರ ನೆರವನ್ನು ಪಡೆಯುವುದರಲ್ಲಿ ಅವರು ಯಶಸ್ವಿಯಾದರು.
1919ರಲ್ಲಿ ಅವರನ್ನು ಮೈಸೂರಿನ ‘ಪ್ರಾಚ್ಯ
ಸಂಶೋಧನ ಸಂಸ್ಥೆ’ಗೆ (ಓರಿಯೆಂಟಲ್
ರಿಸರ್ಚ್ ಇನ್ಸ್ಟಿಟ್ಯೂಟ್) ವರ್ಗಾಯಿಸಲಾಯಿತು. ಅಲ್ಲಿ, ಅವರು ಬಹಳ ನಿಷ್ಠೆಯಿಂದ ಗ್ರಂಥ ಸಂಪಾದನೆಯ
ಕೆಲಸದಲ್ಲಿ ತೊಡಗಿಸಿಕೊಂಡರು. 1927 ರಲ್ಲಿ ಬೆಂಗಳೂರಿಗೆ ಹಿಂದಿರುಗಿ, ಮತ್ತೆ ಹನ್ನೆರಡು ವರ್ಷಗಳ
ಕಾಲ ಅಲ್ಲಿ ಕೆಲಸ ಮಾಡಿದರು. ಅವರ ಆತ್ಮೀಯ ಗೆಳೆಯರಾದ ಟಿ.ಎಸ್. ವೆಂಕಣ್ಣಯ್ಯನವರ ಅಕಾಲಿಕವಾದ ಸಾವಿನ
ಪರಿಣಾಮವಾಗಿ, ಎ.ಆರ್.ಕೃ. ಅವರು ಮೈಸೂರಿಗೆ ಹಿಂದಿರುಗಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ
ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು.(1939) ಅವರು 1946 ರಲ್ಲಿ ಸೇವೆಯಿಂದ
ನಿವೃತ್ತರಾದರು.
ನಿವೃತ್ತಿಯ ಮೊದಲು ಮತ್ತು ಅನಂತರ ಅವರು ಅನೇಕ ಮಹತ್ವದ ಜವಾಬ್ದಾರಿಗಳನ್ನು
ನಿರ್ವಹಿಸಿದರು. ಮೈಸೂರು ವಿಶ್ವವಿದ್ಯಾಲಯವು ಪ್ರಕಟಿಸಿರುವ ಇಂಗ್ಲಿಷ್-ಕನ್ನಡ ನಿಘಂಟಿನ ಸಂಪಾದಕಮಂಡಳಿಯ
ಸದಸ್ಯತ್ವವನ್ನು ಅವರು ಆ ಯೋಜನೆಯ ಆದಿಯಿಂದ ಆಂತ್ಯದವರೆಗೆ ನಿರ್ವಹಿಸಿದರು.(1933-46) 1943-57 ರ
ಅವಧಿಯಲ್ಲಿ, ಬೆಂಗಳೂರಿನ ಕನ್ಡ ಸಾಹಿತ್ಯಪರಿಷತ್ತಿನ ಕನ್ನಡ-ಕನ್ನಡ ನಿಘಂಟು ಯೋಜನೆಯ ಮೊದಲ ಸಂಪಾದಕರಾಗಿದ್ದು,
ಅದಕ್ಕೆ ಭದ್ರವಾದ ತಳಹದಿಯನ್ನು ಹಾಕಿಕೊಟ್ಟರು. ಸಾಹಿತ್ಯ ಪರಿಷತ್ ಪತ್ರಿಕೆಯ ಸಂಪಾದಕರಾಗಿಯೂ ಅವರು
ದುಡಿದಿದ್ದಾರೆ.
ಕನ್ನಡ ಸಾಹಿತ್ಯಕ್ಕೆ ಎ.ಆರ್.ಕೃ. ಅವರು ನೀಡಿರುವ ಕೊಡುಗೆಯನ್ನು
ಬೇರೆ ಬೇರೆ ವಿಭಾಗಗಳಲ್ಲಿ ವಿಂಗಡಿಸಿ ಇಲ್ಲಿ ಕೊಡಲಾಗಿದೆ:
1
|
ಗ್ರಂಥಸಂಪಾದನೆ:
|
|
|
ಅ. ಲಿಂಗಣ್ಣ ಕವಿಯ ‘ಕೆಳದಿನೃಪವಿಜಯ’
(ಆರ್. ಶಾಮಶಾಸ್ತ್ರಿಯವರಿಗೆ ನೆರವು)
|
1921
|
|
ಆ. ನಯಸೇನನ ‘ಧರ್ಮಾಮೃತ’,
(ಆರ್. ಶಾಮಾಶಾಸ್ತ್ರಿಯವರಿಗೆ ನೆರವು)
|
1924, 26
|
|
ಇ. ರಾಘವಾಂಕನ ‘ಹರಿಶ್ಚಂದ್ರ
ಕಾವ್ಯ ಸಂಗ್ರಹ’,
(ಟಿ.ಎಸ್. ವೆಂಕಣ್ಣಯ್ಯನವರೊಂದಿಗೆ)
|
1931
|
|
ಈ. ಈಶ್ವರ ಕವಿಯ ‘ಕವಿಜಿಹ್ವಾಬಂಧನ’
|
1952
|
|
|
|
2
|
ಸ್ವತಂತ್ರ ಕೃತಿಗಳು:
|
|
|
ಅ.‘ಸಂಸ್ಕೃತ
ನಾಟಕ’
|
1937
|
|
ಆ. ‘ಬಂಕಿಮಚಂದ್ರ
ಮತ್ತು ಅವರ ಕೃತಿಗಳು’
|
1960
|
|
ಇ. ‘ಸರ್ವಜ್ಞ’
|
1948
|
|
ಈ. ‘ವಚನ ಭಾರತ’
(ವ್ಯಾಸ ಭಾರತವನ್ನು ಆಧರಿಸಿ)
|
1950
|
|
ಉ. ‘ಕಥಾಮೃತ’
(ಕಥಾ ಸರಿತ್ಸಾಗರವನ್ನು ಆಧರಿಸಿ)
|
1952
|
|
ಊ. ‘ನಿರ್ಮಲ
ಭಾರತೀ’ (ಮಕ್ಕಳಿಗಾಗಿ)
|
1960
|
|
ಋ. ‘ಶ್ರೀಪತಿಯ
ಕಥೆಗಳು’ (ಸಣ್ಣ ಕಥೆಗಳು)
|
1948
|
|
ಎ. ‘ಭಾಷಣಗಳು
ಮತ್ತು ಲೇಖನಗಳು’ (ಎರಡು
ಸಂಪುಟಗಳು)
|
1948, 49
|
|
ಏ. ‘ಕನ್ನಡ
ಕೈಪಿಡಿ’, ಭಾಗ-1.(ಅಲಂಕಾರ
ಶಾಸ್ತ್ರ, ಕಾವ್ಯ ಲಕ್ಷಣ)
|
1927
|
|
ಐ. ‘ಭಾಸ ಕವಿ‘
|
1933
|
|
|
|
3
|
ಅನುವಾದಗಳು:
|
|
|
ಅ. ‘ನಾಗಮಹಾಶಯ’
|
1939
|
|
ಆ. ‘ನಿಬಂಧ
ಮಾಲಾ’
|
1963
|
|
ಇ. ‘ಸ್ವಾಮಿ
ಶಿಷ್ಯ ಸಂವಾದ’
|
1923
|
|
ಈ. ‘ಶ್ರೀ
ರಾಮಕೃಷ್ಣ ಪರಮಹಂಸರ ಚರಿತ್ರೆ’
|
1917
|
(ಕೊನೆಯ ಎರಡು ಅನುವಾದಗಳು ಟಿ.ಎಸ್. ವೆಂಕಣ್ಣಯ್ಯನವರ
ಜೊತೆಯಲ್ಲಿ)
|
ಈ ಪುಸ್ತಕಗಳ ವಿವರವಾದ ಪರಿಶೀಲನೆಯು ಈ ಸಂದರ್ಭದಲ್ಲಿ ಸಾಧ್ಯವಿಲ್ಲ.
ಅವುಗಳಲ್ಲಿ ಬಹು ಪಾಲು ಪುಸ್ತಕಗಳು, ಕಾಲದ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಇಂದಿಗೂ ಉಪಯುಕ್ತವಾಗಿವೆ.
ಎ.ಆರ್.ಕೃ. ಅವರು ಕನ್ನಡ ಗದ್ಯದ ನಿರ್ಮಾಪಕರಲ್ಲಿ ಒಬ್ಬರು. ಅನೇಕ ಪೀಳಿಗೆಗಳ ಓದುಗರು,
‘ವಚನ ಭಾರತ’ ಮತ್ತು
‘ಕಥಾಮೃತ’ಗಳಿಂದ ಶುದ್ಧವೂ
ಪ್ರಮಾಣಬದ್ಧವೂ ಆದ ಕನ್ನಡವನ್ನು ಕಲಿತಿದ್ದಾರೆ. "ಬಂಕಿಮಚಂದ್ರ"ದಂತಹ ಪುಸ್ತಕವು ಬಂಗಾಳಿಯಲ್ಲಿ
ಕೂಡ ಬಂದಿಲ್ಲವೆಂದು ಹೇಳಲಾಗಿದೆ. "ಸಂಸ್ಕೃತ ನಾಟಕ"ವು ಏಕಕಾಲದಲ್ಲಿ ಮಾಹಿತಿಗಳನ್ನು ನೀಡುವುದು,
ವಿಶ್ಲೇಷಣೆ ಮಾಡುವುದು ಮತ್ತು ವಿಮರ್ಶೆ ಮಾಡುವುದು ಎಂಬ ಮೂರೂ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ.
ಕೃಷ್ಣಶಾಸ್ತ್ರಿಯವರು, ತಮ್ಮ
‘ಬಂಕಿಮಚಂದ್ರ ಮತ್ತು ಅವರ ಕೃತಿಗಳು’ ಎಂಬ ಪುಸ್ತಕಕ್ಕಾಗಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.(1961) ಅವರು 1941 ರಲ್ಲಿ ಹೈದರಾಬಾದಿನಲ್ಲಿ
ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1960 ರಲ್ಲಿ ಮೈಸೂರು ವಿಶ್ವವಿದ್ಯಾಲಯವು
ಅವರಿಗೆ ಗೌರವ ಡಿ.ಲಿಟ್ ಪದವಿಯನ್ನು ನೀಡಿತು. ‘ಅಭಿವಂದನೆ’ ಅವರಿಗೆ ಕೊಡಲಾಗಿರುವ ಗೌರವ ಗ್ರಂಥದ ಹೆಸರು.(1956)
|